ಮೂರ್ಛಾರೋಗ - 
ಜ್ಞಾನತಪ್ಪಿ ವ್ಯಕ್ತಿ ನೆಲಕ್ಕೆ ಬಿದ್ದು ಸೆಳವು ಬಂದು ಅನೇಕ ವೇಳೆ ಬಾಯಿಯಲ್ಲಿ ನೊರೆಗಟ್ಟುವ ನರಮಂಡಲ ರೋಗ (ಎಪಿಲೆಪ್ಸಿ). ಇದು ಒಂದು ರೋಗವೇ ಅಲ್ಲ. ಮೇಲೆ ಹೇಳಿದ ಲಕ್ಷಣಕೂಟ (ಸಿಂಡ್ರೋಮ್) ಎನ್ನುವುದು ಬಹುಶಃ ಸರಿ ಎನ್ನಿಸುತ್ತದೆ. ಇದರಲ್ಲಿ ಎರಡು ಬಗೆ ಉಂಟು : ಒಂದು ಬೇರೆ ರೋಗದ ಕುರುಹಾಗಿ ಕಾಣಿಸಿಕೊಳ್ಳುವ ಅಪಸ್ಮಾರ (ಸೆಕೆಂಡರಿ ಎಪಿಲೆಪ್ಸಿ): ಎರಡು, ಅವ್ಯಕ್ತ ಕಾರಣದಿಂದ ಬರುವ ಅಪಸ್ಮಾರ (ಈಡಿಯೊ ಪ್ಯಾಥಿಕ್ ಎಪಿಲೆಪ್ಸಿ). ಮಿದುಳಿನಲ್ಲಿ ಲಾಡಿ ಹುಳುವಿನ ಮರಿಗಳು ಹೊಕ್ಕು ನೆಲಸಿದಾಗ, ಮಿದುಳಿನ ಕೆಲವು ಭಾಗಗಳಲ್ಲಿ ಗಂತಿ (ಟ್ಯೂಮರ್) ಬೆಳೆದಾಗ, ಮಿದುಳಿಗೆ ಜಖಮ್ಮಾಗಿ ಯಾವುದೋ ವಿಶಿಷ್ಟ ಭಾಗದಲ್ಲಿ ಗಾಯದ ಕಲೆ ಉಳಿದಿದ್ದು ವ್ಯಕ್ತಿ ಉದ್ರೇಕಗೊಂಡಾಗ, ಇತ್ಯಾದಿ ಸ್ಥಿತಿಗಳಲ್ಲಿ ವ್ಯಕ್ತ ಕಾರಣ ಫಲವಾದ ಮೂರ್ಛೆರೋಗ ಕಂಡುಬರುತ್ತದೆ.

	ಇದು ಬಲು ಕಾಲ ನರಳಿಸುವ ರೋಗ. ರೋಗ ತಲೆದೋರಿದಾಗ ಅರೆ ಅಥವಾ ಪೂರ್ಣ ಪ್ರಜ್ಞಾಹೀನತೆಯೇ ಮುಖ್ಯಚಿಹ್ನೆ. ಅನೇಕರಲ್ಲಿ ಪ್ರಜ್ಞಾಶೂನ್ಯತೆಯ ಜೊತೆಯಲ್ಲಿ ಅಂಗೋಪಾಂಗಗಳ ಒದರುವಿಕೆ (ಟಾನಿಕ್, ಕ್ಲಾನಿಕ್ ಕಂಟ್ರಾಕ್ಷನ್, ಸ್ಪಾಸ್ಮ್ ಅಥವಾ ಅದಿರುವಾಯು) ಬೆರೆತಿರುವುದು. ಈ ಅದಿರು ವಾಯುವಿನ ಹರಡುವಿಕೆ ಮತ್ತು ತೀವ್ರತೆಗಳಲ್ಲಿ ಏರಿಳಿತಗಳಿರುತ್ತವೆ. ಕ್ಷಣಕಾಲ ಮಾತ್ರ ತಲೆದೋರುವ ಪ್ರಜ್ಞಾಶೂನ್ಯತೆಯನ್ನು ಪೆಟಿಟ್ಮಾಲ್ ಎಂದೂ, ಒದರುವಿಕೆ ಗಣನೀಯವಾಗಿರುವ ಪ್ರಜ್ಞಾಶೂನ್ಯತೆಯನ್ನು ಅಪಸ್ಮಾರ. ಮಲ್ಲಾಗರ (ಗ್ಯಾಂಡ್ ಮಾಲ್, ಮೇಜರ್ ಎಪಿಲೆಪ್ಸಿ) ಎಂದೂ ಕರೆಯುವುದುಂಟು. ಲಿಂಗ ಭೇದವಿಲ್ಲದಂತೆ ಹೆಂಗಸರಲ್ಲೂ ಗಂಡಸರಲ್ಲೂ ಸಮಾನವಾಗಿ ಈ ಸ್ಥಿತಿ ಕಾಣಿಸಿಕೊಳ್ಳುವುದು.

	ಲಕ್ಷಣಗಳು : ಮೂರ್ಛಾವಸ್ಥೆ ಕಾಣಿಸಿಕೊಳ್ಳುವ ಮೊದಲು ಅಂದರೆ 12ರಿಂದ 24 ಗಂಟೆಗಳ ಮುನ್ನ ತಲೆನೋವು, ತಲೆ ತಿರುಗುವಿಕೆ. ಒಂದು ಬಗೆಯ ಆಲಸ್ಯ, ಪರಿಸ್ಥಿತಿಯ ಬದಲಾವಣೆ, ನಡೆವಳಿಕೆಯಲ್ಲಿ ಏನೊ ಒಂದು ರೀತಿಯ ವ್ಯತ್ಯಾಸ ಮುಂತಾದ ಸೂಚನೆಗಳು ಕೆಲವರಲ್ಲಿ ಕಾಣಿಸಿಕೊಳುತ್ತವೆ. 

	ಮತ್ತೆ ಕೆಲವರಲ್ಲಿ ಒಂದು ಬಗೆಯ ಮನ್ಸೂಚನೆಯ ಅರಿವು ಒಂದು ಕ್ಷಣ ಮಾತ್ರ ಭಾಸವಾದಂತಾಗಿ ಮುಂದೊದಗುವ ವಿಪತ್ತಿನ ಸೂಚನೆಯನ್ನು ಕೊಡುವುದು. ಇದು ಬಹುಶಃ ಉದ್ರೇಕವಾಗಲಿರುವ ಮಿದುಳಿನ ನರಾಣುಗಳಿರುವ ಜಾಗಕ್ಕೆ ಸಂಬಂಧಿಸಿರಬಹುದೆಂದು ಊಹೆ. ದೇಹಾದ್ಯಂತವೂ ಒಂದು ಬಗೆಯ ಅಲೆ ತೇಲಿ ಹೋದಂತೆ ಜೋಮು ಹಿಡಿದಂತಾಗುವುದು. ಥಳಥಳ ಹೊಳೆಯುವ ಬೆಳಕು, ವಿವಿಧ ವರ್ಣಗಳು ಅಥವಾ ಕಿವಿಯಲ್ಲಿ ಹಾಡು ಮುಂತಾದ ಭಾವನೆಗಳು ರೋಗಿಯಲ್ಲಿ ಉಂಟಾಗಬಹುದು. ಇಲ್ಲವೇ ಮಾಂಸಖಂಡಗಳ ಅಂಗಗಳ ಒದರುವಿಕೆ, ಒಮ್ಮೊಮ್ಮೆ ಬೆದರುವಿಕೆ ಕಾಣಿಸಿಕೊಳ್ಳಬಹದು. ಅಪರೂಪವಾಗಿ ರೋಗಿ ಮುಂದಕ್ಕೆ ಓಡುತ್ತಲೋ ಇಲ್ಲವೆ ಗುಂಡಗೆ ಸುತ್ತುತ್ತಲೋ ಇರಬಹುದು. ಇಲ್ಲವೇ ವಿಚಿತ್ರವಾದ ಯೋಚನೆಗಳು, ಭಯಾನಕ ಭ್ರಾಂತಿಕಾರಕ ದೃಶ್ಯಗಳು ಗೋಚರಿಸಿ ಲುಪ್ತವಾಗುವುದುಂಟು. ಹೊಟ್ಟೆಯಲ್ಲಿ ತಳಮಳ. ಹೊಟ್ಟೆ ಅದಿರುವುದು ಮತ್ತು ವಮನಪೂರ್ವಸ್ಥಿತಿ ಕಂಡುಬರಬಹುದು. ಇದನ್ನು 'ಆರಾ ಎನ್ನಲಾಗುತ್ತದೆ.

	ಸಾಮಾನ್ಯಫಿಟ್ಸ್‍ನಲ್ಲಿ ಪ್ರಜ್ಞಾಹೀನತೆಯ ತುರ್ತು ಸೂಚನೆಗಳು ಕಾಣಿಸಿಕೊಂಡು ರೋಗಿಗೆ ಅರಿವಾಗುವುದಕ್ಕೆ ಮೊದಲೇ ಥಟ್ಟನೆ ಜ್ಞಾನ ತಪ್ಪಿಹೋಗುತ್ತದೆ. ಅಪಾಯಗಳಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಕೂಡ ಇರುವುದಿಲ್ಲ. ಆದ್ದರಿಂದಲೇ ಪ್ರಜ್ಞಾಹೀನತೆಯ ಅವಸ್ಥೆಯಿಂದ ರೋಗಿಗೆ ಅಪಾಯಗಳೇ ಹೆಚ್ಚು.

	ಒದರುವಿಕೆ ಪ್ರಜ್ಞಾಹೀನತೆಯ ಜೊತೆಯಲ್ಲೇ ಇಲ್ಲವೇ ಪ್ರಜ್ಞಾಹೀನತೆ ಕಂಡೊಡನೆಯೇ ಕಾಣಿಸಿಕೊಳ್ಳುವುದು. ಒಂದು ಬಗೆಯ ವಿಕಾರಧ್ವನಿಯಿಂದ ಕಿರುಚುತ್ತ ವ್ಯಕ್ತಿ ಅದಿರುವಾಯುವಿಗೆ ಈಡಾಗಬಹುದು. ಒದರುವಿಕೆಯ ಬಿಗಿತಸ್ಥಿತಿ ಅಥವಾ ಸೆಟೆತ 40 ಸೆಕೆಂಡ್ ಕಾಲವಿದ್ದು ಒದರುವಿಕೆಯ ಸಡಿಲ ಅಥವಾ ಅದಿರುವಾಯು ಸ್ಥಿತಿ ಬರುವುದು. ಇದು 1 ರಿಂದ 3 ಮಿನಿಟುಗಳ ತನಕ ಇರುವುದು. ಬಿಗಿತದ ಸ್ಥಿತಿಯಲ್ಲಿ ಉಸಿರು ಕಟ್ಟಿ ಬೆನ್ನು ಬಿಗಿಯಾಗಿ ಕಾಲು ಉದ್ದವಾಗಿಯೂ ಬಿಗಿಯಾಗಿಯೂ ಇರುವುದು, ನಾಡಿ ವೇಗವಾಗಿರುವುದಲ್ಲದೆ ಅಗೋಚರವಾಗಿರುವುದು, ಸಡಿಲಸ್ಥಿತಿ ದೇಹಾದ್ಯಂತ ವ್ಯಾಪಿಸುವುದು. ಕೆಲವು ಸಾರಿ ಇದು ವೈಪರೀತ್ಯ ಹೊಂದಿ ಕೈಕಾಲುಗಳು ವೇಗವಾಗಿ ಬಡಿದುಕೊಳ್ಳುತ್ತ ಕಣ್ಣುಗಳು ಬೇಗ ಬೇಗ ಮುಚ್ಚಿ ತೆರೆಯುತ್ತ ಅಂತೆಯೇ ದವಡೆಯ ಚಲನವಲನಗಳು ವೇಗದಿಂದ ಆಗುತ್ತಿರುವುವು. ಈ ಎರಡು ಸ್ಥಿತಿಗಳಲ್ಲೂ ಉಸಿರಾಟಕ್ಕೆ ಅಡ್ಡಿ ಉಂಟಾಗಿ ಗೊರಗುಟ್ಟುವ ಧ್ವನಿ ಕೇಳುವುದು. ಮುಖ ನೀಲಿಯಾಗಿರುವುದು. ನಾಲಗೆ ಹಲ್ಲುಗಳ ಮಧ್ಯೆ ಸಿಲುಕಿ ಗಾಯವಾಗುವುದು. ಕಣ್ಣಿನ ಪಾಪೆಗಳ ರಂಧ್ರಗಳು ಅಗಲವಾಗಿ ಬೆಳಕು ಚಲ್ಲಿದರೂ ವ್ಯತ್ಯಾಸ ತೋರಗೊಡುವುದಿಲ್ಲ. ಒದರುವಿಕೆ ಇಳಿಮುಖವಾದಂತೆ ಉಸಿರಾಟ ಗೊರಕೆ ಹೊಡೆಯುತ್ತಿರುವಂತೆ ಸೌಮ್ಯವಾಗಿರುವುದು. ಈ ಅವಸ್ಥೆಯಲ್ಲಿ ಮಲಮೂತ್ರ ವಿಸರ್ಜನೆಯಾಗಬಹುದು. ಜೊಲ್ಲು ಬಾಯಿಯಿಂದ ನೊರೆನೊರೆಯಾಗಿ ಹೊರಬೀಳುವುದು. ನಾಲಗೆಯ ಗಾಯದಿಂದ ಜೊಲ್ಲು ರಕ್ತಮಿಶ್ರಿತವಾಗಿರಬಹುದು.

	ಒದರುವಿಕೆ ನಿಂತಮೇಲೆ ಒಂದು ಬಗೆಯ ಮಂಕು ಕವಿದಂತಾಗಿ ಕ್ರಮೇಣ ಗಾಢ ನಿದ್ರೆ ಆವರಿಸುವುದು. ಆ ವೇಳೆಗೆ ದೇಹೋಷ್ಣತೆ 3ಲಿಸೆ. ಏರಿರುತ್ತದೆ. ಮೂರ್ಛೆರೋಗದ ಸ್ವಭಾವ ಎಲ್ಲರಲ್ಲೂ ಅಥವಾ ಯಾವಾಗಲೂ ಹಗಲು ಅಥವಾ ರಾತ್ರಿಯ ಯಾವ ವೇಳೆಯಲ್ಲಾದರೂ ಕಾಣಿಸಿಕೊಳ್ಳಬಹುದು. ಹಾಸಿಗೆಯಿಂದ ಎದ್ದ ಕೂಡಲೇ ಇಲ್ಲವೇ ಮಲಗುವ ಮುನ್ನ ಕಾಣಿಸಿಕೊಳ್ಳಬಹುದು. ಇಲ್ಲವೇ ರಾತ್ರಿಯಲ್ಲಿ ನಿದ್ರೆಯಲ್ಲಿ ಮಾತ್ರ ಕಾಣಿಸಿಕೊಳ್ಳಬಹುದು. ಹೆಂಗಸರಲ್ಲಿ ಹೊರಗಾಗುವ ಹಿಂದು ಇಲ್ಲವೇ ಮುಂದಿನ ದಿವಸಗಳಲ್ಲಿ ಒದರುವಿಕೆ ಕಾಣಿಸಿಕೊಳ್ಳುವ ಸಂಭವವುಂಟು. ಗೊತ್ತಾದ ದಿವಸಗಳ ಅಂತರದಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲವೇ ಒಂದೇ ದಿವಸದಲ್ಲಿ ಹಲವು ಸಾರಿ ಬಂದು ಹಲವು ವಾರಗಳ ಅಥವಾ ತಿಂಗಳುಗಳ ಬಿಡುವು ಕೊಡಬಹುದು.		(ಎನ್.ಟಿ.ಪಿ.)

	ಮೂರ್ಛೆರೋಗಕ್ಕೆ ಪರಿಣಾಮಕಾರಿಯಾದ ಔಷಧಿಗಳಿವೆ. ಫೀನೋಬಾರ್ಬಿಟೋನ್, ಫೆನಿಟಾಯಿನ್, ಕಾರ್ಬಮೆಜಿಪಿನ್, ಸೋಡಿಯಂವಾಲ್‍ಪ್ರೊಯೇಟ್, ಫ್ರೀಸಿಯಂ, ಟೋಪಿರಮೈಡ್ ಇತ್ಯಾದಿ. ವೈದ್ಯರ ಮಾರ್ಗದರ್ಶನದಲ್ಲಿ ಒಂದು ಔಷಧಿಯನ್ನು ಕ್ರಮವಾಗಿ ಸೇವಿಸಬೇಕು. ಔಷಧಿಯ ಪ್ರಮಾಣವನ್ನು ನಿಗದಿಪಡಿಸಿಕೊಳ್ಳಬೇಕು. ಫಿಟ್ಸ್ ಬರುವುದು ನಿಂತ ಮೇಲೆ ಮೂರರಿಂದ ಐದುವರ್ಷಗಳ ಕಾಲ ಔಷಧಿಯ ಸೇವನೆಯನ್ನು ಮುಂದುವರೆಸಬೇಕು. ಉಪವಾಸ, ನಿದ್ರೆಗೆಡುವುದು, ವಿಪರೀತ ದೈಹಿಕ, ಮಾನಸಿಕ ಕ್ರಮ, ಔಷಧಿ ಸೇವನೆಯನ್ನು ಥಟ್ಟನೆ ನಿಲ್ಲಿಸುವುದು - ಇವುಗಳಿಂದ ಫಿಟ್ಸ್ ಮರುಕಳಿಸುತ್ತದೆ. ಆದ್ದರಿಂದ ರೋಗಿ ಸಮಯಕ್ಕೆ ಸರಿಯಾಗಿ ಊಟ - ನಿದ್ರೆ ಮಾಡಬೇಕು. ಪ್ರಶಾಂತ ಜೀವನ ನಡೆಸಬೇಕು. ಇತರ ಕಾಯಿಲೆ ಬಂದಾಗ ಮೂರ್ಛೆರೋಗಕ್ಕೆ ಕೊಡುವ ಔಷಧವನ್ನು ನಿಲ್ಲಿಸಬಾರದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ